Monday, 11 June 2018

Admin : ಈಶ್ವರ ವಿವನ್

ರಾತ್ರೋರಾತ್ರಿ ಫೇಮಸ್‌ ಆದ ಕುರಿಗಾಹಿ... ಹನುಮಂತನ ರಾಗಕ್ಕೆ ಮನಸೋತ ಜನ!



ಗದಗ: ಕುರಿ ಕಾಯುತ್ತಾ ಇರೋ ಕುರಿಗಾಹಿ ಹುಡುಗನೊಬ್ಬ ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾನೆ. ಅಲ್ಲದೆ ಈ ಕುರಿಗಾಹಿ ಪ್ರತಿಭೆಗೆ ಸಾಮಾಜಿಕ ಜಾಲತಾಣವು ವೇದಿಕೆಯಾಗಿದೆ.

ಹೌದು, ಗಲಾಟೆ ಅಳಿಯಂದ್ರು ಚಿತ್ರದ ಸಾಗರಿಯೇ ಸಾಗರಿಯೇ ಹಾಡು ಹಾಡುತ್ತಾ ತನ್ನ ಮೊಬೈಲ್ ಸೆಲ್ಫಿಯಲ್ಲಿ ರೆಕಾರ್ಡ್‌ ಮಾಡಿ ಫೇಸ್‌ಬುಕ್‌ಗೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದ ಈ ಯುವಕನ ಹೆಸರು ಹನುಮಂತ ಬಟ್ಟೂರ. ಗದಗ ಜಿಲ್ಲೆ ಶಿರಹಟ್ಟಿಯ ಮೂಲದ ಹಣುಮಂತ ಸದ್ಯ ಫೇಸ್‌ಬುಕ್‌ನಲ್ಲಿ ಟ್ರೆಂಡಿಯಾಗಿದ್ದಾನೆ.

ಕುರಿ‌ ಕಾಯಲಿಕ್ಕೆ ಹೋದ ವೇಳೆ ಕುರಿಗಳ ಮುಂದೆ ನಿಂತು ಹಾಡಿರುವ ಹನುಮಂತನ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಹೈಸ್ಕೂಲ್‌ವರೆಗೆ ಮಾತ್ರ ಶಿಕ್ಷಣ:


ಹನುಮಂತ ಹೈಸ್ಕೂಲ್‌ವರೆಗೂ ಮಾತ್ರ ಶಿಕ್ಷಣ ಪಡೆದಿದ್ದು, ಬದುಕಿನ ಅನಿವಾರ್ಯತೆಯಿಂದ ಕುರಿ ಕಾಯುವ ಕುಲವೃತ್ತಿ ಮುಂದುವರಿಸುತ್ತಿದ್ದಾನೆ.

ಸಾಮಾನ್ಯವಾಗಿ ಎಲ್ಲ ಕುರಿಗಾಹಿಗಳು ಕಲಾವಿದರೆ. ಏಕೆಂದ್ರೆ ಕುರಿಗಳನ್ನು ಕಾಯುತ್ತಾ ಬೇಸರವಾದಾಗ ಹಾಡುಗಳನ್ನು ಹಾಡುತ್ತಾ ದಿನಪೂರ್ತಿ ಅಡವಿಯಲ್ಲಿ ಮೈಮರೆಯುತ್ತಾರೆ. ಅಷ್ಟೇ ಅಲ್ಲ ಹಬ್ಬ ಹರಿದಿನಗಳಲ್ಲಿ ಡೊಳ್ಳಿನ ಪದ, ಜನಪದಗಳನ್ನು ಹಾಡಿ ಜನರನ್ನು ರಂಜಿಸ್ತಾರೆ.


ಆದ್ರೆ ಕುರಿಗಾಹಿ ಹನುಮಂತ ತನ್ನ ಕಂಠದಿಂದ ಬಂದ ರಾಗವನ್ನು ಫೇಸ್‌ಬುಕ್‌ಗೆ ಹಾಕಿ ಮನೆ ಮಾತನಾಗಿದ್ದಾನೆ. ಹನುಮಂತನ ಕಂಠಕ್ಕೆ ಮನಸೋತು ಸೈ ಎಂದು ಸಾಮಾಜಿಕ ಜಾಲತಾಣಿಗರು ಲೈಕ್, ಕಮೆಂಟ್ ಮಾಡ್ತಾ ಇದ್ದಾರೆ.